ಮೊದಾಲು ನೆನೆದೆವು

ಜಾನಪದ

ಮೊದಾಲು ನೆನ್ದೆವು ಸ್ವಾಮಿ ಲಿಂಗನ

ತನುಮತ ಶಿವಗಂಗೆ ಬೇನಾವನ || ಪ ||

ಶಿವಗಂಗೆ ಬೆನವನ ಸ್ತುತಿಗೆ ಕಾಳಿಂಗನ

ದಂಡೇಯ ನಾಯ್ಕ ಇನಿಯಂತ

ದಂಡೇಯನಾಯ್ಕ ಇನಿಯಂತ ಗೌರಿಯ

ಮುದ್ದು ಕುಮಾರ ಕೊಡು ಮತಿಯ ||

ಆರಾನ ಹೈರಿಯ ಓರೀಲಿ ಇರಿವೊನೆ

ನಾರಿಯ ಮಗನೆ ಬೆನವಣ್ಣ

ನಾರಿಯ ಮಗನೆ ಬೆನವರಿಗೆ ಈದೇವ

ಮೇಲಾದ ಪದನ ಬರಕೊಂಡೆ ||

ಬಾನಾವರಾದ ಬಾಗೀಲಲಿರುವೊನೆ

ಬಾಲೆಯ ಮಗನೆ ಬೆನವಣ್ಣ

ಬಾಲೆಯ ಮಗನೆ ಬೆನವಂದೆ ಈದೇವ

ಮೇಲಾದ ಪದನ ಬರಕೋಡೊ ||

ಎಳ್ಳುಹೊಲ್ದಾಗಿರೊ ಡೊಳ್ಹೊಟ್ಟೆ ಬೆನವನ

ಎಳ್ಳೆಲೆ ತುಪ್ಪ ತಿಳಿದುಪ್ಪ

ಎಳ್ಳೆಲೆ ತುಪ್ಪ ತಿಳಿದುಪ್ಪ ಸಲಿಸುವೆ

ಡೊಳ್ಹೊಟ್ಟೆ ಬೆನವ ಕೊಡು ಮತಿಯ ||